ವೆಂಕಟಲಕ್ಷ್ಮಮ್ಮ, ಕೆ
	1906-2002. ಸುಪ್ರಸಿದ್ಧ ನೃತ್ಯ ಕಲಾವಿದೆ. ಕಡೂರು ತಾಲ್ಲೂಕಿನ ತಂಗಲಿ ತಾಂಡ್ಯದ ಬಣಜಾರ್ ಪಂಗಡದಲ್ಲಿ 1906ರಲ್ಲಿ ಜನಿಸಿದರು. ವಿದ್ಯಾಭ್ಯಾಸ ಸಲುವಾಗಿ ಇವರ ಹಿರಿಯರು ಇವರನ್ನು ಮೈಸೂರಿಗೆ ಕರೆತಂದರು. ಮೈಸೂರಿನಲ್ಲಿ ನಾಟ್ಯಸರಸ್ವತಿ ಎಂದು ಹೆಸರಾಗಿದ್ದ ಜೆಟ್ಟಿತಾಯಮ್ಮ (ನೋಡಿ- ಜಟ್ಟಿ-ತಾಯಮ್ಮ) ಅವರಲ್ಲಿ ನೃತ್ಯಾಭ್ಯಾಸ ಆರಂಭಿಸಿ 20 ವರ್ಷಗಳ ಕಾಲ ಶಿಕ್ಷಣ ಪಡೆದರು. ಅವರ ನೇತೃತ್ವ ದಲ್ಲಿಯೇ ಅನೇಕ ವಿದ್ವಾಂಸರ ಸಮ್ಮುಖದಲ್ಲಿ ನೃತ್ಯಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾದರು. ಇದೇ ಅವಧಿಯಲ್ಲಿ ಆಸ್ಥಾನ ವಿದ್ವಾನ್ ಬಿ. ದೇವೇಂದ್ರಪ್ಪನವರಲ್ಲಿಯೂ ಆಸ್ಥಾನವಿದ್ವಾನ್ ಚಿಕ್ಕರಾಮ ರಾಯರಲ್ಲಿಯೂ ಸಂಗೀತ ಅಭ್ಯಾಸವನ್ನು ಮಾಡಿದರು. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅವರ ಆಸ್ಥಾನ ವಿದುಷಿಯಾಗಿ ಸು. 20 ವರ್ಷಗಳ ಕಾಲ ಸೇವೆಸಲ್ಲಿಸಿದರು.

	ಇವರು ಶಾಸ್ತ್ರೀಯವಾದ ಮೈಸೂರು ಸಂಪ್ರದಾಯದ ಭರತನಾಟ್ಯ ಶಿಕ್ಷಣವನ್ನು ನೀಡುವ ಸಲುವಾಗಿ 1954ರಲ್ಲಿ ಭರತ ಕಲಾನಿಕೇತನವೆಂಬ ಸಂಸ್ಥೆಯನ್ನು ಮೈಸೂರಿನಲ್ಲಿ ಸ್ಥಾಪಿಸಿ ಅದರ ಪ್ರಾಂಶುಪಾಲರಾಗಿ ಸು. 12 ವರ್ಷ ಸೇವೆ ಸಲ್ಲಿಸಿದರು. ಅನೇಕ ಪಾಶ್ಚಾತ್ಯ ಮಹಿಳೆಯರೂ ಬಂದು ಇದರಲ್ಲಿ ನೃತ್ಯ ಶಿಕ್ಷಣ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾನಿ ಲಯ ಲಲಿತಕಲೆಗಳ ಕಾಲೇಜನ್ನು ಆರಂಭಿಸಿದಾಗ (1965) ಇವರನ್ನು ನೃತ್ಯ ವಿಭಾಗದ ಉಪಪ್ರಾಧ್ಯಾಪಕರಾಗಿ ನೇಮಿಸಿತು. ಇಲ್ಲಿ ಇವರು 9 ವರ್ಷ ಸೇವೆಸಲ್ಲಿಸಿದ್ದರು.

	ಇವರು ರಾಜ್ಯಸಂಗೀತ ಅಕಾಡೆಮಿಯ ಸದಸ್ಯರಾಗಿದ್ದರಲ್ಲದೆ ರಾಜ್ಯದ ಹಲವು ಸಂಗೀತ ನೃತ್ಯ ಸಂಸ್ಥೆಗಳೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು. ರಾಜ್ಯ ಸಂಗೀತ ನಾಟಕ ಅಕಾಡೆಮಿ 1962ರಲ್ಲಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನ ಗಾನಕಲಾ ಪರಿಷತ್ತು ಇವರಿಗೆ ನಾಟ್ಯ ವಿಶಾರದೆ ಎಂಬ ಬಿರುದನ್ನಿತ್ತು ಸನ್ಮಾನಿಸಿದೆ. 1964ರಲ್ಲಿ ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಬಂತು. ಮೈಸೂರು ವಿಶ್ವವಿದ್ಯಾ ನಿಲಯ 1977ರಲ್ಲಿ ಇವರಿಗೆ ಗೌರವ ಡಿ.ಲಿಟ್. ಪದವಿಯನ್ನಿತ್ತು ಗೌರವಿಸಿತು.  ಇವರು 2002 ಜುಲೈ 3ರಂದು ನಿಧನರಾದರು.				
		(ಎಮ್.ಎಸ್.ಎ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ